೧೮ನೆಯ ಶತಮಾನದ ಅಂತ್ಯದ ವೇಳೆ ಆಗಿನ ಮೈಸೂರು ಪ್ರಾಂತ್ಯ ಮತ್ತು ಸುತ್ತಮುತ್ತ ಒಬ್ಬ ಸೈನಿಕನಾಗಿ, ಅಶ್ವದಳದ ನಾಯಕನಾಗಿ, ಕೆಲವು ಪ್ರದೇಶಗಳ ಒಡೆಯನಾಗಿ, ಬ್ರಿಟೀಶರ ವಿರುದ್ಧ ಮೈಸೂರು ಪ್ರಾಂತ್ಯದಲ್ಲಿ ಹೋರಾಟ ಮಾಡಿದ ಒಬ್ಬ ಸಾಹಸಿ ಧೊಂಡಿಯ ವಾಘ್. ಕೆಳದಿಯ ಸಂಸ್ಥಾನದಲ್ಲಿ ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂಭಿಸಿದ. ನಂತರ ಮೈಸೂರಿನ ಹೈದರಾಲಿ ಸೈನ್ಯದಲ್ಲಿ ಸೈನಿಕನಾಗಿ ಸೇರಿದ. ಮೂರನೇ ಮೈಸೂರು ಯುದ್ಧದ ನಂತರ ಈ ಸೈನ್ಯವನ್ನು ತೊರೆದು ಸ‍್ವತಂತ್ರವಾಗಿ ಸೈನ‍್ಯ ಕಟ್ಟಿ ಹರಿಹರ (ಊರು), ಸವಣೂರು ಮುಂತಾದ ಊರುಗಳನ್ನು ಗೆದ್ದು ತನ್ನ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನಿಸಿದ. ಮರಾಠಾರೊಂದಿಗೆ ಸೋತ ಕಾರಣ ಮತ್ತೆ ಟಿಪ್ಪುವನ್ನು ಆಶ್ರಯಿಸಲು ನಿಶ್ಚಯಿಸಿದ. ಆದರೆ ಕಾರಣಾಂತರದಿಂದ ಟಿಪ್ಪು ಈತನನ್ನು ೫ ವರ್ಷಗಳ ಕಾಲ ಬಂಧನದಲ್ಲಿ ಇರಿಸಿದ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ನಂತರ ಧೊಂಡಿಯ ಶ್ರೀರಂಗಪಟ್ಟಣದಿಂದ ತಪ್ಪಿಸಿಕೊಂಡು ಮತ್ತೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸಿ ಉಭಯಲೋಕಾಧೀಶ್ವರ ಎನ್ನಿಸಿಕೊಂಡ. ಕಡೆಯಲ್ಲಿ ಬ್ರಿಟೀಷರೊಡನೆ ಹೋರಾಡುತ್ತಾ ೧೮೦೦ರಲ್ಲಿ ಮರಣ ಹೊಂದಿದ
ಧೊಂಡಿಯ ಚೆನ್ನಗಿರಿಯಲ್ಲಿ ೧೮ನೇ ಶತಮಾನದ ಉತ್ತರ ಭಾಗದಲ್ಲಿ ಹುಟ್ಟಿದ. ಮರಾಠಿ ಪವಾರ್ ಪಂಗಡದ ಒಂದು ಸಾಮಾನ್ಯ ಪರಿವಾರದಲ್ಲಿ ಇವರ ಜನನ . ಆ ಕಾಲಖಂಡದಲ್ಲಿ ಚೆನ್ನಗಿರಿಯು ಕೆಳದಿಯ ಸಂಸ್ಥಾನದ ಅಡಿಗೊಳಪಟ್ಟಿತ್ತು. ಧೊಂಡಿಯ ಕೆಳದಿಯ ಚೆನ್ನಮ್ಮನ ಕಥೆಗಳನ್ನು ಕೇಳುತ್ತಾ ಬೆಳದನು. ಗುರು ಸಿದ್ದಪ್ಪ ಶೆಟ್ಟರ ಗರಡಿಯಲ್ಲಿ ಅಶ್ವಾರೋಹಣ, ಕತ್ತಿ ವರಸೆ, ಮಲ್ಲಯುದ್ಧಗಳ ಅಭ್ಯಾಸವನ್ನು ಮಾಡಿ ಇಡೀ ಚೆನ್ನಗಿರಿ ಸೀಮೆಗೆ ಉದಯೋನ್ಮುಖ ಯೋಧನೆನಿಸಿಕೊಂಡಿದ್ದ. ಆ ಸಮಯದಲ್ಲಿ ಕೆಳದಿಯ ರಾಜಮನೆತನದಲ್ಲಿ ಅಂತಃಕಲಹಗಳು ಏರ್ಪಟ್ಟಿತ್ತು. ಇವೆಲ್ಲದರ ನಡುವೆ ಎತ್ತರದ ನಿಲುವಿನ, ಶಕ್ತಿಶಾಲಿ, ಯುವ ಪ್ರಭಾವಿ ವ್ಯಕ್ತಿತ್ವದ ಧೊಂಡಿಯನಿಗೆ ಕೆಳದಿಯ ಸಂಸ್ಥಾನದ ಸೈನ್ಯ ಸೇರಲು ಊರಿನ ಜನ ಹುರಿದುಂಬಿಸಿದರು.
ಧೊಂಡಿಯ ಕೆಳದಿಯ ಸಂಸ್ಥಾನದ ಭಾಗವಾಗಿದ್ದ ಶಿಕಾರಿಪುರದಲ್ಲಿ ಒಬ್ಬ ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂಭಿಸಿದ. ಈ ನಡುವೆ ಹೈದರಾಲಿ ಚಿತ್ರದುರ್ಗದ ರಾಜನಾದ ವೀರ ಮದಕರಿ ನಾಯಕರನ್ನು ಸೋಲಿಸಿದನು. ನಂತರ ಅವನ ದೃಷ್ಟಿ ಕೆಳದಿಯ ಮೇಲೆ ಬಿತ್ತು. ಆ ಸಂಸ್ಥಾನದಲ್ಲಿ ನಡೆಯುತ್ತಿದ್ದ ಒಳ ರಾಜಕೀಯ ಮೇಲಾಟಗಳ ಪ್ರಯೋಜನ ಪಡೆಯಲು ಹವಣಿಸುತ್ತಿದ್ದ. ಈ ವಿಚಾರವು ಸಂಸ್ಥಾನದಲ್ಲೆಲ್ಲಾ ತಿಳಿದು ಜನ ಮುಂದಿನ ಪರಿಸ್ಥಿತಿಯ ಬಗ್ಗೆ ಚಂತಿತರಾಗಿದ್ದರು. ಕೆಲ ಸಮಯದ ನಂತರ ಹೈದರಾಲಿ ಕೆಳದಿ ಸಂಸ್ಥಾನದ ರಾಜಧಾನಿಯಾದ ಬಿದನೂರಿನ ಮೇಲೆ ದಾಳಿ ಮಾಡಿದ. ರಾಣಿ ವೀರಮ್ಮಾಜಿ ವೀರಾವೇಶದಿಂದ ಹೋರಾಡಿದರು. ಆದರೆ ಅಲ್ಲಿ ನಡೆದ ಒಳಸಂಚಿನ ಕಾರಣ ಸೋತರು.
ಧೊಂಡಿಯ ಹೈದರಾಲಿಯ ಸೈನ್ಯವನ್ನು ಸೇರಿದ. ಅಲ್ಲಿ ವಿಷ್ಣುಪಂಡಿತ ಎಂಬ ಅಶ್ವದಳಪತಿ ಕೆಳಗೆ ಕೆಲಸ ಪ್ರಾರಂಭಿಸಿದ. ತನ್ನ ಒಡನಾಡಿಗಳೊಡನೆ ಒಳ್ಳೆಯ ಸಂಬಂಧ ಬೆಳೆಸಿಕೊಂಡ. ತನ್ನ ಸತತ ಪರಿಶ್ರಮದ ಕಾರಣದಿಂದ ಕೆಲವೇ ಸಮಯದಲ್ಲಿ ಅವನು ಅಶ್ವದಳದ ನಾಯಕ ಶಿಲ್ಲೆದಾರ್ ಪದವಿಗೆ ಏರಿದ.
0 Comments